ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಗುಲಬರ್ಗಾ ಸಮಗ್ರ ಸಂಚಾರ ಯೋಜನೆ: ಭಾಗೀದಾರರೊಂದಿಗೆ ಚರ್ಚಿಸಲು ಸೂಚನೆ

ಗುಲಬರ್ಗಾ ಸಮಗ್ರ ಸಂಚಾರ ಯೋಜನೆ: ಭಾಗೀದಾರರೊಂದಿಗೆ ಚರ್ಚಿಸಲು ಸೂಚನೆ

Sun, 25 Apr 2010 03:08:00  Office Staff   S.O. News Service

ಗುಲಬರ್ಗಾ,ಏ.೨೪.(ಕ.ವಾ.)-ರಾಷ್ಟ್ರೀಯ ನಗರ ಸಾರಿಗೆ ನೀತಿಯನ್ವಯ ಗುಲಬರ್ಗಾ ನಗರದ ಸಮಗ್ರ ಸಂಚಾರ ಮತ್ತು ಸಾರಿಗೆ ಯೋಜನೆಯ ಅಂತಿಮ ವರದಿಯನ್ನು ರೂಪಿಸುವ ಮುನ್ನ ಎಲ್ಲ ಭಾಗೀದಾರರೊಂದಿಗೆ (ಸ್ಟೇಕ್ ಹೋಲ್ಡರ್ಸ್) ಹಲವಾರು ಸುತ್ತಿನ ಚಿಂತನ ಮಂಥನ ನಡೆಸಬೇಕು ಎಂದು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ ಮಹ್ಮದ್ ಮೊಹಸೀನ್ ಅವರು ಹೇಳಿದರು.

 

 

ಅವರು ಶುಕ್ರವಾರ ಗುಲಬರ್ಗಾದಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮುಂದಿನ ೨೦ ವರ್ಷಗಳಲ್ಲಿ ಆಗಲಿರುವ ಗುಲಬರ್ಗಾ ನಗರದ ಸಮಗ್ರ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವರದಿ ರೂಪಿಸಬೇಕೆಂದರು.

 

 

ವಿವಿಧ ರಸ್ತೆಗಳ ನಿರ್ಮಾಣ , ರಸ್ತೆಗಳ ಅಗಲೀಕರಣ, ವಿವಿಧ ಕೂಡು ರಸ್ತೆಗಳ ವೃತ್ತಗಳಲ್ಲಿರುವ ಸಂಚಾರ ದಟ್ಟಣೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಕಾರ್ಯಾಚರಣೆ, ಪಾದಚಾರಿ, ಪಾರ್ಕಿಂಗ್, ಚರಂಡಿ, ಸೇತುವೆ, ಸುಗಮ ಸಂಚಾರ ವ್ಯವಸ್ಥೆ, ಮಾಸ್ಟರ್ ಪ್ಲ್ಯಾನ್, ಪರ್ಯಾಯ ಭೂಮಿ ಬಳಕೆ ಮುಂತಾದ ಹಲವಾರು ವಿಷಯಗಳ ಬಗ್ಗೆ ಅಧ್ಯಯನ ಮತ್ತು ಸಮೀಕ್ಷಾ ಕಾರ್ಯ ಕೈಗೊಳ್ಳಬೇಕು. ಇದಕ್ಕಾಗಿ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕಾರ್ಯಕ್ರಮ ಮತ್ತು ಯೋಜನೆಗಳನ್ನು ರೂಪಿಸಬೇಕೆಂದು ಹೇಳಿದರು.

 

 

ಶಾಸಕ ಖಮರುಲ್ ಇಸ್ಲಾಂ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಮನೋಜ್ ಜೈನ್ ಅವರು ಸಭೆಯಲ್ಲಿ ಪಾಲ್ಗೊಂಡು ಗುಲಬರ್ಗಾ ನಗರದ ಸಮಗ್ರ ಸಂಚಾರ ಮತ್ತು ಸಾರಿಗೆ ಯೋಜನೆ ರೂಪಿಸಲು ಅನುವಾಗುವಂತೆ ಅನುಸರಿಸಬೇಕಾದ ಅಗತ್ಯ ಮತ್ತು ತುರ್ತು ಕ್ರಮ ಹಾಗೂ ಸಲಹೆಗಳನ್ನು ನೀಡಿದರು. ಬೆಂಗಳೂರಿನ ಸಾರಿಗೆ ತರಬೇತಿ ಸಂಸ್ಥೆ ಮತ್ತು ಸಲಹಾ ಕೇಂದ್ರದ (ಟ್ರಾನ್ಸ್‌ಪೋರ್ಟ್ ಟ್ರೇನಿಂಗ್ ಇನ್ಸ್‌ಟಿಟ್ಯೂಶನ್ ಆಂಡ ಕೌನ್ಸ್‌ಲ್ಟೆನ್ಸಿ) ಗ್ರೂಪ್ ಸೀನಿಯರ್ ಮ್ಯಾನೇಜರ್ ಸಚಿನ್ ಅವರು ಗುಲಬರ್ಗಾ ನಗರದ ಸಮಗ್ರ ಸಂಚಾರ ಮತ್ತು ಸಾರಿಗೆ ಯೋಜನೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.


Share: